ಪರ್ತ್
	ಪಶ್ಚಿಮ ಆಸ್ಟ್ರೇಲಿಯದ ರಾಜಧಾನಿ. ಸ್ವಾನ್ ನದಿಯ ಮೇಲೆ ಅದರ ಮುಖದಲ್ಲಿರುವ ಫ್ರೀಮ್ಯಾಂಟಲ್ ಬಂದರಿನಿಂದ 19ಕಿಮೀ. ದೂರದಲ್ಲಿ ದ.ಅ. 31056 ಮತ್ತು ಪೂ.ರೇ. 115050' ಮೇಲೆ ಇದೆ. ಇಪ್ಪತ್ತನೆಯ ಶತಮಾನದಲ್ಲಿ ಬಹಳ ಮಟ್ಟಿಗೆ ಪುನರ್‍ನಿರ್ಮಿತವಾದ ಈ ನಗರ ಅನೇಕ ಉಪನಗರಗಳಿಂದ ಕೂಡಿ ನದಿಯ ಉತ್ತರದಲ್ಲಿ 32 ಕಿ ಮೀ. ಗೂ ಹೆಚ್ಚು ದೂರ ಹಬ್ಬಿದೆ. ನಗರದ ಜನಸಂಖ್ಯೆ 97.242 (1971). ಬೃಹತ್ ನಗರದ ಜನಸಂಖ್ಯೆ 7,01,392. ಇದು ಆಸ್ಟ್ರೇಲಿಯದ ಐದನೆಯ ದೊಡ್ಡ ನಗರ. ಪಶ್ಚಿಮ ಆಸ್ಟ್ರೇಲಿಯ ರಾಜ್ಯದ ಅರ್ಧಕ್ಕೂ ಹೆಚ್ಚು ಜನರು ಇಲ್ಲಿದ್ದಾರೆ. 

	ಇಲ್ಲಿಯದು ಮಡಿಟರೇನಿಯನ್ ಪ್ರರೂಪಿ ವಾಯುಗುಣ. ಜನವರಿ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಉಷ್ಣತೆ ಅಧಿಕ; ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಹವೆ ತಂಪು ಮತ್ತು ಆದ್ರ್ರ, ವರ್ಷದಲ್ಲಿ ಸುಮಾರು 914 ಮಿಮೀ. ಮಳೆಯಾಗುತ್ತದೆ. ಇದು ಹೆಚ್ಚಾಗಿ ಮೇಯಿಂದ ಅಕ್ಟೋಬರ್ ವರೆಗಿನ ಕಾಲದಲ್ಲಿ ಬೀಳುತ್ತದೆ. 

	ಪರ್ತ್ ಪಶ್ಚಿಮ ಆಸ್ಟ್ರೇಲಿಯದ ರಾಜಕೀಯ. ನ್ಯಾಯಿಕ ಮತ್ತು ಆಡಳಿತ ಕೇಂದ್ರವಾಗಿರುವುದರ ಜೊತೆಗೆ ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದೆ. ಪ್ರೀಮ್ಯಾಂಟಲ್ ಬಂದರಿನ ಮೂಲಕ ವ್ಯಾಪಾರ ನಡೆಯುತ್ತದೆ. ಗೋದಿ, ಕುರಿ ಮತ್ತು ಖನಿಜಗಳು ಇಲ್ಲಿಂದ ಇತರ ಎಡೆಗಳಿಗೆ ಸಾಗುತ್ತವೆ. ಅನೇಕ ಹೆದ್ದಾರಿಗಳೂ ರೈಲುಮಾರ್ಗಗಳೂ ಇಲ್ಲಿ ಕೊಡುತ್ತವೆ. ಸೌತ್ ಗಿಲ್ಡ್‍ಫರ್ಡಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವುಂಟು.

	ಪರ್ತ್ ಒಂದು ಮುಖ್ಯ ಕೈಗಾರಿಕಾ ಕೇಂದ್ರ. ಕ್ವಿನಾನಾ, ಫ್ರೀಮ್ಯಾಂಟಲ್ ಮತಣ ವೆಲ್ಷ್‍ಪೂಲ್‍ಗಳ ಉಪನಗರಪ್ರದೇಶಗಳಲ್ಲಿ ದೊಡ್ಡ ಕೈಗಾರಿಕೆಗಳಿವೆ. ಪ್ಲಾಸ್ಟರ್, ಮುದ್ರಣ, ಲೋಹದ ತಗಡು, ಸಿಮೆಂಟ್, ರಬ್ಬರ್, ಟ್ರ್ಯಾಕ್ಟರ್, ಉಕ್ಕು, ಪೆಟ್ರೋಲ್ ಶುದ್ಧೀಕರಣ, ಆಹಾರ ಸಂಸ್ಕರಣ ಮೊದಲಾದ ಕೈಗಾರಿಕೆಗಳು ಇಲ್ಲಿವೆ.

	ಪರ್ತ್‍ನಲ್ಲಿ ಅನೇಕ ದೊಡ್ಡ ಕಟ್ಟಡಗಳುಂಟು. ಆಂಗ್ಲಿಕನ್ನರ ಸೆಂಟ್ ಚಾರ್ಚ ಕತಿಡ್ರಲ್, ರೋಮನ್ ಕ್ಯಾತೊಲಿಕರ ಸೆಂಟ್ ಮೇರಿಯ ಕತಿಡ್ರಲ್ ಮುಖ್ಯವಾದವು. ಇಲ್ಲಿ ಸಂಸತ್ ಸಭಾಭವನ. ಸರ್ಕಾರಿ ಭವನ, ನಗರ ಭವನ, ವಸ್ತು ಸಂಗ್ರಹಾಲಯ, ಕಲಾ ಮಂದಿರ ಮತ್ತು ಸಾರ್ವಜನಿಕ ವಾಚನಾಲಯ ಇವೆ.

	1911ರಲ್ಲಿ ಸ್ಥಾಪಿತವಾದ ಪಶ್ಚಿಮ ಆಸ್ಟ್ರೇಲಿಯ ವಿಶ್ವವಿದ್ಯಾಲಯ ಇಲ್ಲಿಯ ಉಪನಗರವೊಂದರಲ್ಲಿದೆ. ಒಂದು ತಾಂತ್ರಿಕ ಶಿಕ್ಷಣ ಕಾಲೇಜು, ಎರಡು ಪ್ರಶಿಕ್ಷಣ ಕಾಲೇಜುಗಳು ಮತ್ತು ಅನೇಕ ಖಾಸಗಿ ಕಾಲೇಜುಗಳು ಪರ್ತ್‍ನಲ್ಲಿವೆ. 

	1829ರಲ್ಲಿ ಪರ್ತ್ ಸ್ಥಾಪಿತವಾಯಿತು. 1856ರಲ್ಲಿ ಇದು ನಗರವಾಯಿತು. 1890ರಲ್ಲಿ ಕೂಲ್‍ಗಾರ್ಡಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಮೇಲೆ ವಲಸೆಗಾರರು ಹೆಚ್ಚು ಸಂಖ್ಯೆಯಲ್ಲಿ ಬರತೊಡಗಿದರು. 1897ರಲ್ಲಿ ಫ್ರೀಮ್ಯಾಂಟ್‍ಲ್ ಬಂದರು ಆರಂಭವಾಯಿತು. 1917ರಲ್ಲಿ ಪೂರ್ವ ರಾಜ್ಯಗಳೊಂದಿಗೆ ರೈಲ್ವೆ ಸಂಪರ್ಕ ಏರ್ಪಟ್ಟ ಮೇಲೆ ನಗರದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಪ್ರಚೋದನೆ ದೊರಕಿತು.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ